ಚಾರಿತ್ರಿಕ ಭೌತವಾದ -
ಈ ವಾದ (ಹಿಸ್ಟಾರಿಕಲ್ ಮಟೀರಿಯಲಿಸಂ) ಅದಕ್ಕಿಂತ ವಿಶಾಲವಾದ ಕಾರ್ಲ್ ಮಾಕ್ರ್ಸ್‍ನ ವಿಚಾರಾತ್ಮಕ ಭೌತವಾದದ (ಡಯಲೆಕ್ಟಿಕಲ್ ಮಟೀರಿಯಲಿಸಂ) ಒಂದು ವಿಶೇಷ ಅನ್ವಯ. ಇದೇ ಅದಕ್ಕೆ ಆಧಾರವೂ ಹೌದು. ವಿಚಾರಾತ್ಮಕ ಭೌತವಾದದ ಈ ಸಾಮಾನ್ಯ ತತ್ತ್ವ ಎಲ್ಲ ವಿಧವಾದ ಇರವಿನ ಸ್ವಭಾವ ಮತ್ತು ಬೆಳೆವಣಿಗೆಯ ಸಾಮಾನ್ಯ ಲಕ್ಷಣವನ್ನು ತಿಳಿಸುತ್ತದೆ. ಈ ತತ್ತ್ವದ ಪ್ರಕಾರ ಇರವು ಪ್ರಧಾನವಾಗಿ ಭೌತವಾದದ್ದು. ನಾವು ಯಾವುದನ್ನು ಚೇತನವೆಂದು ಕರೆಯುತ್ತೇವೆಯೋ ಅದು ಕೂಡ ಭೌತವಾದುದರಿಂದಲೇ ಅದಕ್ಕೆ ಅಧೀನವಾಗಿ ಅದರ ನಿಯಮಕ್ಕೆ ಒಳಪಟ್ಟು ಉದ್ಭವಿಸಿದ್ದು. ನಮ್ಮ ಅರಿವೇ, ನಮ್ಮ ಚೇತನವೇ, ಭೌತವಸ್ತುವಿನ ಪ್ರಾಧಾನ್ಯವನ್ನು ಸಾರುತ್ತದೆ. ನಮ್ಮಲ್ಲಿ ತಿಳಿವು ನಿಜವಾಗಬೇಕಾದರೆ ಅದು ಆಯಾ ವಸ್ತುವಿನ ಸ್ವಭಾವವನ್ನು ಅನುಸರಿಸಬೇಕು. ಕಬ್ಬು ಸಿಹಿ, ಬೇವು ಕಹಿ ಎಂಬ ತಿಳಿವು ಸತ್ಯವಾಗುವುದಕ್ಕೆ ಕಾರಣ ಅದು. ಅದರದರ ಅಂದರೆ ಕಬ್ಬಿನ, ಬೇವಿನ ಸ್ವಭಾವಕ್ಕನುಗುಣವಾಗಿರುವುದು. ನಾವು ತಿಳಿಯುವುದು ಕೇವಲ ಹೊರಗಿನ ವಸ್ತುಗಳನ್ನು ಮಾತ್ರವೇ ಅಲ್ಲ, ನಮ್ಮ ದೇಹವೂ ನಮ್ಮ ಅರಿವಿನ ವಸ್ತು. ಅದಿಲ್ಲದೆ ಯಾವ ವಿಧವಾದ ಅರಿವೂ ಇಲ್ಲ.

ಎಲ್ಲವೂ ಭೌತವೇ ಎಂಬ ತತ್ತ್ವ ಹಳೆಯದಾದರೂ ಮಾಕ್ರ್ಸನ ಭೌತತತ್ತ್ವದಲ್ಲಿ ಕೆಲವು ವೈಶಿಷ್ಟ್ಯಗಳಿವೆ. ಹಿಂದಿನ ಭೌತವಾದದ ಪ್ರಕಾರ ಭೌತವನ್ನು ಕೇವಲ ಜಡವೆಂದೂ ಅದರಲ್ಲಿ ಕಾಣುವ ವ್ಯತ್ಯಾಸಗಳು ಪರಿಮಾಣ ಭೇದಗಳೇ ಹೊರತು, ಗುಣಗಳ ಮಾರ್ಪಾಡಲ್ಲವೆಂದೂ ತಿಳಿಯಲಾಗಿತ್ತು. ಮಾಕ್ರ್ಸನ ಪ್ರಕಾರ ಜಡವಸ್ತು ಕ್ರಿಯಾತ್ಮಕವಾದದ್ದು, ರಚನಾತ್ಮಕವಾದದ್ದು, ನಿರಂತರವಾಗಿ ವೈವಿಧ್ಯವುಳ್ಳ ಬೆಳೆವಣಿಗೆಯುಳ್ಳದ್ದು. ಯಾವುದು ಎಲ್ಲ ಕಾಲಕ್ಕೂ ಚಿರವಾಗಿ ಬೆಳವಣಿಗೆ ಇಲ್ಲದೆ ವೈವಿಧ್ಯವಿಲ್ಲದೆ ತಟಸ್ಥವಾಗಿ ತಾನೇತಾನಾಗಿ ಇರಲಾರದು. ಪ್ರತಿಯೊಂದು ಕ್ಷಣದಲ್ಲೂ ವಿಧವಿಧವಾದ ಭಿನ್ನಭಿನ್ನವಾದ ಅಂಶಗಳಲ್ಲಿ ವಿರೋಧಗಳೂ ಘರ್ಷಣೆಗಳೂ ಕಾಣಿಸಿಕೊಂಡು ಒಂದರೊಡನೆ ಒಂದು ಸೆಣೆದಾಡಿ ಹೊಸ ಹುಟ್ಟಿಗೆ ಕಾರಣಗಳಾಗುತ್ತವೆ. ನಿರಂತರವಾಗಿ ಹಳೆಯದು ಹೋಗಿ ಹೊಸದು ಹುಟ್ಟುತ್ತದೆ. ಒಂದಕ್ಕೂ ಇನ್ನೊಂದಕ್ಕೂ ಘರ್ಷಣೆ ನಡೆದು ಹೊಸದು ಬೆಳೆಯುವುದೇ ವಿಶ್ವದ ಚರಿತ್ರೆಯ ವೈಶಿಷ್ಟ್ಯ. ಈ ರೀತಿಯಾದ ಘರ್ಷಣೆಯಿಂದ ಹೊಸದು ಬೆಳೆಯುವುದನ್ನು ತೋರಿಸುವ ತತ್ತ್ವವಿಧಾನಕ್ಕೆ ಡಯಲೆಕ್ಟಿಕ್ ಎಂದು ಹೆಸರು. ಹೆಗಲ್ ಎಂಬ ತಾತ್ತ್ವಿಕ ಈ ಕ್ರಮವನ್ನು, ಚೇತನವೇ ಪ್ರಧಾನವೆಂದು ಎಣಿಸಿ, ಅದಕ್ಕೆ ಅನ್ವಯಿಸಿದ. ಮಾಕ್ರ್ಸ್ ಆದರೋ ತದ್ವಿರುದ್ಧವಾಗಿ ಭೌತಶಕ್ತಿಯೇ ಮೂಲಾಧಾರವೆಂದು ಎಣಿಸಿ ಅದಕ್ಕೆ ಡಯಲೆಕ್ಟಿಕ್ ಕ್ರಮವನ್ನು ಅನ್ವಯಿಸಿದ.

ಹಳೆಯದರಲ್ಲಿ ಪರಸ್ಪರ ಘರ್ಷಣೆ ತಲೆದೋರಿ ಹೊಸದು ಹುಟ್ಟುವ ವಿಧಾನ ಪ್ರಕೃತಿಯಲ್ಲಿ ಮಾತ್ರವಲ್ಲದೆ ಮಾನವ ಸಂಘ ಜೀವನದಲ್ಲೂ ಮುಂದುವರಿಯುತ್ತದೆ ಎಂದು ತೋರಿಸುವ ತತ್ತ್ವ ವಿಭಾಗಕ್ಕೆ ಚಾರಿತ್ರಿಕ ಭೌತವಾದ ಎಂದು ಹೆಸರು. ಜೀವನಕ್ಕೆ ಆಧಾರವಾದ ಪ್ರಕೃತಿಯ ಸ್ವಭಾವವನ್ನು ವೈಜ್ಞಾನಿಕ ವಿಧಾನದಿಂದ ಅರಿತು ಅದರ ಮೂಲಕ ಮಾನವ ಸಮಾಜದ ಕಲ್ಯಾಣವನ್ನು ಸಾಧಿಸಿದ, ಸಾಧಿಸುತ್ತಿದ್ದಾನೆಯಲ್ಲದೆ ಮುಂದೆ ಸಾಧಿಸಬೇಕಾದದ್ದೂ ಚಾರಿತ್ರಿಕ ಭೌತವಾದದ ವಸ್ತು.

ಈ ಚಾರಿತ್ರಿಕ ಭೌತವಾದ ಪಾಸಿಟಿವಿಸಂ ಎಂಬ ಹಿಂದಿನ ಭೌತವಾದವಲ್ಲ. ಆ ಹಿಂದಿನ ಭೌತವಾದದ ಪ್ರಕಾರ ಭೌತವಸ್ತು ಕೇವಲ ಯಾಂತ್ರಿಕಕ್ರಿಯೆ, ಅದು ಕೇವಲ ಯಂತ್ರದಂತೆ ಪುನಶ್ಚರಣ. ಕೇವಲ ಪುನಶ್ಚರಣವೆಂದು ತಿಳಿಸುವ ವಿಜ್ಞಾನವೇ ಸರ್ವಸ್ವ ಎಂದು ಆ ಪಂಥದವರು ತಿಳಿದಿದ್ದರು. ಚಾರಿತ್ರಿಕ ಭೌತವಾದಿಗಳಾದರೋ ತತ್ತ್ವದ ಆಶ್ರಯವಿಲ್ಲದ ವಿಜ್ಞಾನವೇ ಸರ್ವಸ್ವ ಎಂದು ಎಣಿಸುವುದಿಲ್ಲ. ತತ್ತ್ವದ ಆಶ್ರಯವಿಲ್ಲದ ವಿಜ್ಞಾನ ಜೀವನಕ್ಕೆ ಉಪಯೋಗಕಾರಿಯಲ್ಲ. ಅದು ಸಾರ್ಥಕವಾಗಬೇಕಾದರೆ ಜೀವನದ ಬೆಲೆಗಳನ್ನು ಪುರುಷಾರ್ಥಗಳನ್ನು ಬೆಳೆಸಲು ಸಾಧಕವಾಗಬೇಕು.

ಪ್ರಕೃತಿ ಜಡವಲ್ಲ, ಅದು ಬದಲಾವಣೆ ಇಲ್ಲದ ವಸ್ತುವಲ್ಲ. ಅಂತೆಯೇ ಸಮಾಜವೂ ಜಡವಲ್ಲ; ಬದಲಾವಣೆ ಇಲ್ಲದ ನಿಸ್ತೇಜಕ ವಸ್ತುವಲ್ಲ. ಹೊಸ ಹೊಸ ಬೆಲೆಗಳನ್ನು ಬೆಳೆಸಲು ಅದರ ಮೈಕಟ್ಟನ್ನು ಹೊಸಹೊಸದಾಗಿ ರಚಿಸಿಕೊಳ್ಳುವುದೇ ಅದರ ಜೀವಾಳ. ಜೀವನಕ್ಕೆ ಪ್ರಪ್ರಥಮವಾಗಿ ಆಧಾರವಾದದ್ದು ಅರ್ಥ. ಅದಿಲ್ಲದೆ ಜೀವನವಿಲ್ಲ. ಅದನ್ನು ನ್ಯಾಯರೀತಿಯಲ್ಲಿ ಅಂದರೆ ಒಬ್ಬ ಇನ್ನೊಬ್ಬನನ್ನು ತನ್ನ ಗುಲಾಮನಾಗಿ ಮಾಡಿಕೊಳ್ಳದೆ ಸಹಕಾರದಿಂದ, ಪ್ರಾಮಾಣಿಕವಾದ ದುಡಿಮೆಯಿಂದ, ಅರ್ಥವನ್ನು ಸೃಷ್ಟಿಸುವುದು ಮಾನವನ ಪ್ರಥಮ ಧರ್ಮ. ಆ ಆರ್ಥಿಕ ಧರ್ಮ ಜೀವನದ ಮೂಲಾಧಾರ. ಅದು ಸಿದ್ಧಿಸದಿದ್ದರೆ ಬೇರೆ ಯಾವ ಧರ್ಮವೂ ಯಾವ ಪುರುಷಾರ್ಥವೂ ಸಿದ್ಧಿಸಲಾರದು. ಈ ಮೊದಲನೆಯ ಧರ್ಮವನ್ನು ಪಾಲಿಸಿಕೊಳ್ಳದ ಸಮಾಜ ಪೊಳ್ಳು ಸಮಾಜ. ಆ ಧರ್ಮದ ಆಧಾರದ ಮೇಲೆ ಸಮಾಜವನ್ನು ಕಟ್ಟುವುದು ಮಾನವನ ಮೊದಲ ಕರ್ತವ್ಯ. ಪ್ರಾಮಾಣಿಕವಾದ ಸೃಷ್ಟ್ಯಾತ್ಮಕವಾದ ಆರ್ಥಿಕ ಜೀವನ ಮಾನವನ ಸತ್ತ್ವವನ್ನು ಒರೆ ಹೆಚ್ಚಿ ನೋಡುವಂತೆ ಬೇರೆ ಯಾವುದೂ ನೋಡಲಾರದು. ಸಹನೆ, ಸೌಜನ್ಯ, ಸತ್ಯ, ಧೈರ್ಯ, ವೀರ್ಯ, ಪರಸ್ಪರಾನುಕಂಪ, ಅನುರಾಗ, ಶಾಂತಿ-ಈ ಕಲ್ಯಾಣಗುಣಗಳು ಮೊಳಗುವುದು ಈ ಆರ್ಥಿಕ ಜೀವನದಲ್ಲಿ. ಇದು ಪ್ರಥಮ ತತ್ತ್ವ; ಪ್ರಥಮ ಧರ್ಮ; ಸೌಂದರ್ಯ; ಸತ್ಯ. ಮತ್ತು ಇತರ ಪುರುಷಾರ್ಥಗಳು ಅನಂತರದವು. ಇದನ್ನು ಅನುಸರಿಸಿ ಬೆಳೆಯುವಂಥವು.

ಮಾನವನ ಚರಿತ್ರೆಯುದ್ದಕ್ಕೂ ಈ ಪ್ರಥಮ ಸತ್ಯವನ್ನು ಅವಲಂಬಿಸಿದವರಿಗೂ ಇದನ್ನು ನಿರಾಕರಿಸಿದವರಿಗೂ ಘರ್ಷಣೆ ನಡೆದಿದೆ. ಡಿಮಾಕ್ಟಿಟಸ್ ಹೆರಾಕ್ಲೈಟಸ್ ಎಂಬ ತಾತ್ತ್ವಿಕರು ಈ ಹೋರಾಟವನ್ನು ಮೊಟ್ಟಮೊದಲಿಗೆ ನಡೆಸಿದವರು. ಬೇಕನ್, ದಿದೆರೊ, ಹೆಲ್ವೆಟಿಯಸ್, ಸ್ಪಿನೋಜಾ-ಇವರು ಅನಂತರ ಈ ತತ್ತ್ವವನ್ನು ಹಿಡಿದೆತ್ತಿದರೆಂದೂ ಗ್ರೀಕರಲ್ಲಿ ಪ್ಲೇಟೋ ಆಧುನಿಕರಲ್ಲಿ ಹೆಗಲ್ ಇದಕ್ಕೆ ಪ್ರತಿಯಾದ ವಾದವನ್ನು ಹಿಡಿದೆತ್ತಿದರೆಂದೂ ಚಾರಿತ್ರಿಕ ಭೌತವಾದಿಗಳು ಭಾವಿಸುತ್ತಾರೆ. ಈ ಎಲ್ಲ ತತ್ತ್ವಗಳನ್ನೂ ವಿಮರ್ಶಿಸಿ ಇವುಗಳ ಲೋಪದೋಷಗಳನ್ನು ತೋರಿಸಿ ಮಾಕ್ರ್ಸ್ (1818-83) ಮತ್ತು ಎಂಗೆಲ್ಸ್ (1820-1895) ಹೊಸ ಭೌತವಾದವನ್ನು ನಿರ್ಮಿಸಿದರು.

ಸಮಾಜದಲ್ಲಿ ದುಡಿದು ಜೀವಿಸುವವರ ಹಕ್ಕುಗಳನ್ನು ಕಡೆಗಣಿಸಿ, ದುಡಿಯದೆ ಜೀವಿಸುವ ಜನ ಅವರನ್ನು ದಾಸ್ಯಕ್ಕೆ ಈಡು ಮಾಡುತ್ತಿದ್ದರು. ಪ್ರಾಚೀನ ಕಾಲದಿಂದಲೂ ಮಾನವನ ಚರಿತ್ರೆ ಈ ಎರಡು ವರ್ಗಗಳ ಹೋರಾಟದ ಚರಿತ್ರೆಯೇ ಆಗಿದೆ. ರೋಮನ್ ಸಾಮ್ರಾಜ್ಯ ಕಾಲದಲ್ಲಿ ಸಾಮಂತರಿಗೂ ಸಾಮಾನ್ಯರಿಗೂ ಘರ್ಷಣೆ, ಮಧ್ಯಯುಗದಲ್ಲಿ ಫ್ಯೂಡಲ್ ಭೂಮಾಲಿಕರಿಗೂ ಅವರ ಜೀತಗಾರರಿಗೂ ಘರ್ಷಣೆ, ಫ್ಯೂಡಲ್ ಸಮಾಜ ಶಿಥಿಲವಾದ ಅನಂತರ ಬಂಡವಾಳಶಾಹಿ ಸಮಾಜ ರೂಪುಗೊಂಡು ಕೂಲಿಗಾರರಿಗೂ ಬಂಡವಾಳಶಾಹಿಗಳಿಗೂ ಘರ್ಷಣೆ ನಡೆದುವು. ಈ ಘರ್ಷಣೆ 19ನೆಯ ಶತಮಾನದಲ್ಲಿ ಪ್ರಬಲಗೊಂಡು ಬಂಡವಾಳ ಪದ್ಧತಿಯಾಗಿ, ಸಾಮಾನ್ಯ ಜನರ ಕಣ್ಣುಕುಕ್ಕುವಂತೆ ಅವರ ಮುಂದೆ ಬಂದು ನಿಂತಿತು. ಅವರು ಬಂಡವಾಳಗಾರರ ಮೇಲೆ ತಿರುಗಿ ಬಿದ್ದು ಕ್ರಾಂತಿ ಎಬ್ಬಿಸಿದರು. ಈ ಜನರ ಕ್ರಾಂತಿಯ ಕೂಗಿಗೆ ಮಾಕ್ರ್ಸ್ ಮತ್ತು ಎಂಗೆಲ್ಸ್ ಬೆಂಬಲವಿತ್ತು ಅವರ ಅಂತರಂಗದ ಭಾವನೆಗಳನ್ನು ತಾತ್ತ್ವಿಕವಾಗಿ ಹೊರಗೆಡಹಿದರು. ಚಾರಿತ್ರಿಕ ಭೌತವಾದ ಕೂಲಿಗಾರವರ್ಗದ ಕ್ರಾಂತಿಯನ್ನು ಸಮರ್ಥಿಸುವ ವಾದ. ಆದ್ದರಿಂದ ಅದು ಕ್ರಾಂತಿವಾದ. ಕ್ರಾಂತಿಯೇ ಕೆಲಸಗಾರರ ವಿಮೋಚನೆಗೆ ನ್ಯಾಯವಾದ ದಾರಿ ಎಂದು ಅವರು ಸಮರ್ಥಿಸಿದರು. ಕೂಲಿಗಾರರು ಸಂಘಟಿತವಾಗಿ ಹೋರಾಡುವುದೇ ಚರಿತ್ರೆಯ ಆದೇಶ. ಹೀಗೆ ಸಂಘ ನಿರ್ಮಾಣ ಮಾಡುವುದಕ್ಕೆ ನೆರವಾಗುವ ತತ್ತ್ವಕ್ಕೆ ಕಮ್ಯೂನಿಸ್ಟ್ ತತ್ತ್ವವೆಂದು ಹೆಸರು.

ಮಾಕ್ರ್ಸ್ ಮತ್ತು ಎಂಗೆಲ್ಸ್ ಕಮ್ಯೂನಿಸ್ಟ್ ಕ್ರಾಂತಿಗೆ ಕಾರಣರಾದರೆ, ಬಂಡವಾಳ ಸಮಾಜವನ್ನು ಧ್ವಂಸ ಮಾಡಲು ಅನುವಾದರ, ಧ್ವಂಸಕ್ಕೊಳಗಾದ ಜನರನ್ನು ರಚನಾತ್ಮಕ ಕಮ್ಯೂನಿಸ್ಟ್ ಸಂಘದ ಮೂಲಕ ಕಟ್ಟಲು ಲೆನಿನ್ ಸಹಾಯ ಮಾಡಿದ; ಕಮ್ಯೂನಿಸ್ಟ್ ಪಕ್ಷವನ್ನು ಕಟ್ಟಿ ಇಂದಿನ ರಷ್ಯವನ್ನು ನಿರ್ಮಾಣ ಮಾಡಿದ. ಈಗ ರಷ್ಯದಲ್ಲಿ ಆ ಪಕ್ಷವನ್ನು ಬಿಟ್ಟು ಬೇರೆ ಪಕ್ಷವಿಲ್ಲ; ಅಂದರೆ ಅಲ್ಲಿಯ ಸಮಾಜವೂ ಪಕ್ಷವೂ ಒಂದೇ ಆಗಿದೆ. ಅಂತಿಮದಲ್ಲಿ ಸಮಾಜದಲ್ಲಿನ ಎರಡು ವಿರುದ್ಧ ಪಂಗಡಗಳು ಹೋಗಿ ಸಮಾಜವೆಲ್ಲ ಒಂದೇ ಪಂಗಡವಾಗಿ ಮಾರ್ಪಡುವುದು ಕಮ್ಯೂನಿಸಮ್ಮಿನ ಗುರಿ ಎಂದು ನುಡಿದ ಕ್ರೊಪೊಟ್‍ಕಿನ್ ಎಂಬ ಸಮಾಜವಾದಿಯ ಭವಿಷ್ಯ ಇಂದು ಕೈಗೊಡುತ್ತಿದೆ. ಆದರೂ ಸದಾ ಬೆಳೆಯುತ್ತಿರುವುದು ಸಮಾಜದ ಸ್ವಭಾವವಾದುದರಿಂದ ಅಲ್ಪಸ್ವಲ್ಪ ವ್ಯತ್ಯಾಸಗಳು, ಮತಭೇದಗಳು ಇದ್ದೇ ಇರುತ್ತವೆ. ಹಾಗಿಲ್ಲದೆ ಸಮಾಜದ ಹೊಸ ಬೆಲೆಗಳು ಹುಟ್ಟಲು ಅವಕಾಶವಿರುವುದಿಲ್ಲ. ಈಗ ಸೋವಿಯೆತ್ ರಷ್ಯದ ಜನ ಭಿನ್ನ ಮತಗಳು ವಿರುದ್ಧವಾದುವೆಂದು ಅಷ್ಟಾಗಿ ಭಾವಿಸದೆ, ಅವು ಹೆಚ್ಚಿನ ಪ್ರಗತಿಗೆ ಅಗತ್ಯವೆಂದು ತಿಳಿದು ಸಹಬಾಳ್ವೆಯ ತತ್ತ್ವವನ್ನು ಆಚರಿಸುತ್ತಿದ್ದಾರೆ.

ಹೀಗೆ ಚಾರಿತ್ರಿಕ ಭೌತವಾದ ಗೊಡ್ಡು ಬೀಳದೆ ಫಲಪ್ರದವಾಗಿ ವಿರಾಜಿಸುತ್ತಿದೆ. ಒಟ್ಟಿನಲ್ಲಿ ಧ್ಯೇಯವಾದಕ್ಕೂ ಭೌತವಾದಕ್ಕೂ ಇರುವ ಅಂತರ ಕಡಿಮೆಯಾಗುತ್ತಿದೆ. ಧೈಯವಾದವನ್ನು ಅನುಸರಿಸುವ ದೇಶಗಳಲ್ಲೂ ಭೌತವಾದ ಬಹುಮಟ್ಟಿಗೆ ಆಚರಣೆಗೆ ಬರುತ್ತಿದೆ. ವೈವಿಧ್ಯವೂ ಬೆಳೆವಣಿಗೆಯೂ ಜೀವನದ ಜೀವಾಳವೆಂಬ ತತ್ತ್ವ ಹಿಂದೆ ಎಂದೂ ಇಲ್ಲದಷ್ಟು ಪ್ರಮುಖವಾಗಿ ಈಗ ಎದ್ದು ಕಾಣುತ್ತಿದೆ. ಇದಕ್ಕೆ ಮಾಕ್ರ್ಸ್, ಎಂಗೆಲ್ಸ್, ಮತ್ತು ಲೆನಿನ್ ಬಹುಮಟ್ಟಿಗೆ ಕಾರಣರು. ಇದು ಅವರ ತತ್ತ್ವದ ಒಂದು ಒಳ್ಳೆಯ ಗುಣವೆಂಬುದನ್ನು ನಿರಾಕರಿಸಲಾಗುವುದಿಲ್ಲ.					(ಜಿ.ಎಚ್.ಆರ್.; ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ